ಕುತುಬ್‍ಷಾಹಿ ಮನೆತನ

16-17ನೆಯ ಶತಮಾನದಲ್ಲಿ ಸ್ವತಂತ್ರ ಗೋಲ್ಕೊಂಡ ರಾಜ್ಯವನ್ನಾಳಿದ ಮನೆತನ. ಈ ಮನೆತನದವರ ರಾಜ್ಯ ವಾರಂಗಲ್ಲಿನ ಹಿಂದೂ ರಾಜ್ಯದ ಅವನತಿಯ ತರುವಾಯ ಬೆಳೆಯಿತು. ಈ ರಾಜ್ಯವನ್ನು ಬಹಮನಿ ಅರಸರು 1424ರಲ್ಲಿ ಗೆದ್ದರು. ಕುತುಬ್‍ಷಾಹಿ ವಂಶದ ಸ್ಥಾಪಕ ಮಲಿಕ್ ಕುಲಿ ಕುತುಬ್ ಉಲ್ ಮುಲ್ಕ್ ಎಂಬ ತುರ್ಕಿ ಅಧಿಕಾರಿ. ಈತ ಮಹಮದ್ ಷಹನ ಆಳ್ವಿಕೆಯಲ್ಲಿ ಬಹಮನಿ ರಾಜ್ಯದಲ್ಲಿ ಅಧಿಕಾರಿಯಾಗಿದ್ದ. ಮಹಮ್ಮದ್ ಗವಾನ್ ಇವನನ್ನು ತೆಲಂಗಾಣದ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದ. ಕುಲಿಷಹ ಅನೇಕ ವರ್ಷಗಳ ಕಾಲ ವಿಧೇಯನಾಗಿ ವರ್ತಿಸುತ್ತಿದ್ದರೂ ಬಹಮನಿ ರಾಜ್ಯ ಒಡೆದು 5 ಸಣ್ಣ ರಾಜ್ಯಗಳಾದಾಗ ಬಾರಿದ್‍ಷಾಹಿಯವರ ಅಧಿಕಾರ ದರ್ಪಗಳನ್ನು ನೋಡಿ ತಡೆಯಲಾರದೆ 1512 ರಲ್ಲಿ ಅಥವಾ 1518ರಲ್ಲಿ ಸ್ವತಂತ್ರನಾದ. ಇವನ 25 ವರ್ಷದ ಆಳ್ವಿಕೆಯಲ್ಲಿ ರಾಜ್ಯ ಸಂಪತ್ಸಮೃದ್ದಿ ಹೊಂದಿತು. ಇವನೂ ಇವನ ಮಗ ಮಹಮದ್ ಕುಲಿ ಕುತುಬ್‍ಷಹನೂ ಗೋಲ್ಕೊಂಡ ರಾಜ್ಯವನ್ನು ವಿಸ್ತರಿಸಿ ಅಭಿವೃದ್ದಿಗೆ ತಂದರು. ಮಹಮ್ಮದ್ ಕುಲಿ ಕುತುಬ್‍ಷಹ ಹೈದರಾಬಾದ್ ಪಟ್ಟಣವನ್ನು ನಿರ್ಮಿಸಿದ.

ಮಲಿಕ್ ಕುಲಿ ಕುತುಬ್ ಉಲ್‍ಮುಲ್ಕ್ ತನ್ನ 90ನೆಯ ವಯಸ್ಸಿನಲ್ಲಿ (1543) ತನ್ನ ಮಗ ಜಮ್ ಷೀದನಿಂದ ಕೊಲೆಯಾದ. ಅನಂತರ ಜಮ್‍ಷೀದ್ 7 ವರ್ಷಗಳ ಕಾಲ ಆಳಿದ. ತರುವಾಯ, ಈತನ ಸಹೋದರ ಇಬ್ರಾಹಿಂ ಪಟ್ಟಕ್ಕೆ ಬಂದು, ಇವನು 1565ರಲ್ಲಿ ಇತರ ಷಾಹೀ ರಾಜ್ಯಗಳನ್ನು ಒಟ್ಟುಗೂಡಿಸಿ ವಿಜಯನಗರ ಸಾಮ್ರಾಜ್ಯದ ಮೇಲೆ ಯುದ್ಧ ಮಾಡಿದ. ಇಬ್ರಾಹಿಂ ಉತ್ತಮ ಅಡಳಿತಗಾರ ; ಹಿಂದೂ ಜನರನ್ನು ಧಾರಾಳವಾಗಿ ಮೇಲ್ಮಟ್ಟದ ಅಧಿಕಾರ ಸ್ಥಾನಕ್ಕೆ ನೇಮಿಸಿಕೊಂಡಿದ್ದ.

ಕುತುಬ್‍ಷಾಹಿ ಸುಲ್ತಾನದಲ್ಲಿ ಅಬ್ದುಲ್ ಹಸನ್ ಕುತುಬ್‍ಷಹ 1672ರಿಂದ 10 ವರ್ಷ ರಾಜ್ಯವಾಳಿದಾಗ ಹಿಂದೂ ಧರ್ಮಕ್ಕೆ ಪ್ರೋತ್ಸಾಹವಿತ್ತು. ಭಕ್ತ ರಾಮದಾಸರ ಕಥೆಯಲ್ಲಿ ಇವನನ್ನು ತಾನೇಷಾ ಎಂದು ಹೆಸರಿಸಲಾಗಿದೆ. ಈತ ಹಿಂದೂ ಮುಸ್ಲಿಂ ಭೇದವೆಣಿಸಲಿಲ್ಲ. ಸಾಹಿತ್ಯ, ವೇದಗಳು ಮತ್ತು ಪುರಾಣಗಳಲ್ಲಿ ಪರಿಶ್ರಮ ಪಡೆದಿದ್ದ ಪಂಡಿತರಿಗೆ ಅಗ್ರಹಾರಗಳನ್ನೂ ದೇವಾಲಯಗಳನ್ನೂ ಕಟ್ಟಿಸಿಕೊಟ್ಟು ಭೂಮಿಗಳನ್ನು ದಾನವಾಗಿ ಕೊಟ್ಟುದಲ್ಲದೆ ಕವಿಗಳಿಗೂ ಉತ್ತೇಜನ ನೀಡಿ, ತೆಲುಗು ಸಾಹಿತ್ಯದಲ್ಲಿ ಇಬಾರಾಮ ಎಂಬ ಹೆಸರು ಪಡೆದಿದ್ದಾನೆ.

ಅಬ್ದುಲ್ ಹಸನ್ ಕುತುಬ್‍ಷಹನ ಮತಸಹಿಷ್ಣುತೆಯನ್ನು ಔರಂಗ್eóÉೀಬ್ ಕೇಳಿದ್ದ. ಈ ನೀತಿಯನ್ನು ಆತ ಸಹಿಸದೆ ಗೋಲ್ಕೊಂಡದ ಮೇಲೆ ದಂಡೆತ್ತಿ ಬಂದ. 8 ತಿಂಗಳ ಕಾಲ ಕೋಟೆಗೆ ಮುತ್ತಿಗೆ ಹಾಕಿದರೂ ಉಪಯೋಗವಾಗಲಿಲ್ಲ. ಅಂತ್ಯದಲ್ಲಿ ಮೀರ್ ಜುಮ್ಲಾ ಎಂಬವನಿಗೆ ಸುಲ್ತಾನ ಪದವಿಯನ್ನು ಕೊಡಿಸುವೆನೆಂದು ಆಶೆ ತೋರಿಸಿ ಕೋಟೆಯನ್ನು ಸ್ವಾಧೀನಪಡಿಸಿಕೊಂಡ. ತಾನೇ ಷಹನನ್ನೂ ಅವನ ಹಿಂದೂ ಮಂತ್ರಿಗಳಾದ ಅಕ್ಕನ್ನ ಮತ್ತು ಮಾದನ್ನರನ್ನೂ ಸೆರೆಹಿಡಿದು ಕೋಟೆಯನ್ನು ನಾಶ ಮಾಡಿ ನಗರದಿಂದ ರತ್ನ ಮತ್ತು ವಜ್ರಗಳನ್ನು ಸಾಗಿಸಿದ. ಮೊಗಲ್ ಚಕ್ರಾಧಿಪತ್ಯದ ಅವನತಿಗೆ ಈ ಆಕ್ರಮಣವೂ ಒಂದು ಕಾರಣವಾಯಿತು.

 ಕುತುಬ್‍ಷಾಹಿ ಅರಸರ ರಾಜಧಾನಿ ಗೋಲ್ಕೊಂಡ. ಹೈದರಾಬಾದಿಗೆ 6 ಮೈಲಿ ದೂರದಲ್ಲಿದೆ. ಪ್ರಪಂಚದ ವಜ್ರದ ಗಣಿಯೆಂದು ಸರ್ ಥಾಮಸ್ ಮನ್ರೋ ಇದನ್ನು ಹೊಗಳಿದ್ದಾನೆ; ಕವಿಗಳು ಇದನ್ನು ರತ್ನಗರ್ಭ ಎಂದು ಕರೆದಿದ್ದಾರೆ. ವಿಜಯನಗರದಲ್ಲಿ ಈ ಪಟ್ಟಣದ ವಜ್ರಗಳು ಮಾರಾಟವಾಗುತ್ತಿದ್ದವು. ಈ ಕೋಟೆ ಹಿಂದೂ ಮುಸ್ಲಿಂ ಮೈತ್ರಿಯ ಗುರುತಾಗಿ ಈಗಲೂ ನಿಂತಿದೆ. 

            

(ಸಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ